ರಮೇಶನ ಗೆಳೆಯರ ಗುಂಪಿನಲ್ಲಿ ನಾನೂ ಒಬ್ಬ. ಸುಮಾರು ಎರಡು ವರುಷಗಳ ಹಿಂದೆ ರಮೇಶ ನಮ್ಮನ್ನು ಅಗಲಿದಾಗ ಅವನ ಸಾವು ಎಲ್ಲ ಗೆಳೆಯರನ್ನೂ ಕಾಡಿದಂತೆ ನನ್ನನ್ನೂ ಸ್ವಲ್ಪ ಕಾಲ ಕಾಡಿತ್ತು. ರಮೇಶ ಬಿಟ್ಟು ಹೋದ ಆಸ್ತಿ ಎಂದರೆ; ಅವನು ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಪತ್ರಕರ್ತನಾಗಿದ್ದಾಗ ಆಗಿಂದಾಗ್ಗೆ ಬರೆಯುತ್ತಿದ್ದ ಪದ್ಯಗಳು. ಅವೆಲ್ಲವನ್ನೂ ಜತನದಿಂದ ಕಾಪಾಡಿದವರು ರಮೇಶನ ಪತ್ನಿ ಉಮಾ. ರಮೇಶನ ಈ ಪದ್ಯಗಳನ್ನೆಲ್ಲಾ ಒಟ್ಟು ಮಾಡಿ ಸಂಕಲನವನ್ನು ಪ್ರಕಟಿಸುವ ಆಲೋಚನೆ ಮೂಡಿದ್ದು ನನಗೆ ಹಾಗೂ ರಮೇಶನೊಂದಿಗೆ ಕೆಲಸ ಮಾಡಿದ ಮಾಧವ ಪ್ರಸಾದ್, ಎಂ ಕೆ ಶಂಕರ, ಮತ್ತು ಮುರಳೀಧರ ಖಜಾನೆ ಅವರಿಗೆ. ರಮೇಶನ ಎಲ್ಲ ಪದ್ಯಗಳನ್ನೂ ಅಚ್ಚುಕಟ್ಟಾಗಿ ಜೋಡಿಸಿ ಒದಗಿಸಿದವರು ರಮೇಶನ ಗೆಳೆಯರಾಗಿದ್ದ ಹಾಗೂ ಪ್ರಜಾವಾಣಿ ಪತ್ರಿಕೆಯಲ್ಲಿ ಪತ್ರಕರ್ತರಾಗಿದ್ದ ಕುಸುಮ ಶಾನುಭಾಗ್. ಪದ್ಯಗಳ ಸಂಕಲನವನ್ನು ಪ್ರಕಟಿಸಲು ನಿರ್ಧರಿಸಿದಾಗ ಅವುಗಳ ಮೌಲ್ಯಮಾಪನದ ಪ್ರಶ್ನೆ ಎದುರಾಯಿತು. ಪದ್ಯಗಳ ಗುಣಮಟ್ಟವನ್ನು ಒರೆಗೆ ಹಚ್ಚಲು ಸ್ನೇಹಿತರೆಲ್ಲ ಸೇರಿ ರಮೇಶನ ಸಂಪರ್ಕವಿಲ್ಲದ ಮೂರನೆಯ ತಟಸ್ಥ ಮನಸ್ಸೊಂದಕ್ಕೆ ಪದ್ಯಗಳ ಸಾಹಿತ್ಯಕ ಮೌಲ್ಯ ನಿರ್ಧರಿಸುವ ಜವಾಬ್ದಾರಿ ವಹಿಸಲು ನಿರ್ಧರಿಸಿದೆವು. ಹೈದರಾಬಾದಿನಲ್ಲಿರುವ ಸಾಹಿತ್ಯ ಚಿಂತಕರೊಬ್ಬರು, ಈ ಸಂಕಲದಲ್ಲಿರುವ ಎಲ್ಲ ಪದ್ಯಗಳನ್ನೂ ಓದಿ ಅವು ತಮ್ಮ (ಎಸೋಟೆರಿಕ್) ನಿಗೂಢ ಸತ್ವದಿಂದ ಗಮನಾರ್ಹವಾಗಿವೆ ಎಂದು ವಿಶ್ಲೇಷಿಸಿದ್ದಾರೆ. ಈ ಪದ್ಯಗಳ ಸಂಕಲನದ ಮುಖಪುಟ ವಿನ್ಯಾಸ ಮಾಡಿ ಪದ್ಯಗಳಿಗೆ ಅರ್ಥಗರ್ಭಿತವಾದ ರೇಖಾಚಿತ್ರಗಳನ್ನು ರಚಿಸಿದ ಗುಜ್ಜಾರಪ್ಪ ನಮ್ಮೆಲ್ಲರ ಹಾಗೂ ರಮೇಶನ ಆತ್ಮೀಯ ಗೆಳೆಯ. ಅತ್ಯಲ್ಪ ಕಾಲದಲ್ಲಿ ಈ ಪುಸ್ತಕವನ್ನು ಇಳಾ ಗ್ರಾಫಿಕ್ಸ್‌ನ ಗುರುಮೂರ್ತಿ ಪ್ರೀತಿಯಿಂದ ಆಕರ್ಷಕವಾಗಿ ಮುದ್ರಿಸಿ ಕೊಟ್ಟಿದ್ದಾರೆ. ಇವರೆಲ್ಲರಿಗೂ ಧನ್ಯವಾದ ಹೇಳುವುದು ಕೃತಕವಾಗಿ ಕಂಡರೂ ಗೆಳೆತನದ ಅನಿವಾರ್ಯ. ಲೇಖಕ ರಮೇಶ ಈಗ ನಿಗೂಢ ವಲಯ ಸೇರಿರುವುದರಿಂದ ಓದುಗರ ಯಾವುದೇ ತೀಕ್ಷ್ಣ ಕಟು ವಿಮರ್ಷೆಯಿಂದ ಅಬಾಧಿತ. ಹಾಗಾಗಿ ಪ್ರಾಮಾಣಿಕ ಪ್ರಾಂಜಲ ಮನಸ್ಸಿನ ಟೀಕೆ-ಟಿಪ್ಪಣಿಗಳಿಗೆ ತೆರೆದ ಬಾಗಿಲು.
“This book was produced with ePustaka - Ink and Weave initiative by Techfiz Inc. (https://techfiz.com) Reach us via info@techfiz.com.”
ಹಾಸಾಕೃ
ಗೆಳೆಯರ ಗುಂಪು ಹಾಗೂ
ನಾಕುತಂತಿ ಪ್ರಕಾಶನದ ಪರವಾಗಿ